ರಜಿóಯಾ ಸುಲ್ತಾನ	1236 - 40 ದೆಹಲಿ ಸಿಂಹಾಸನವನ್ನೇರಿದ ಪ್ರಥಮ ಮಹಿಳೆ. ರಜಿóಯತ್ ಉದ್ದೀನ ಅಥವಾ ರಜಿóಯಾ ಬೇಗಂ ಅಥವಾ ರಜಿóಯಾ ಸುಲ್ತಾನ ಎಂದೂ ಇವಳನ್ನು ಕರೆಯುತ್ತಿದ್ದರು. ಈಕೆ ಗುಲಾಮೀ ಸಂತತಿಯ ಸುಲ್ತಾನನಾದ ಆಲ್ತಮಷನ ಮಗಳು. ಆಲ್ತಮಷ್ ತನ್ನ ಮಗಳೇ ತನಗೆ ಉತ್ತರಾಧಿಕಾರಿಯೆಂದು ಸಾಯುವ ಮುನ್ನ ಘೋಷಿಸಿದ್ದ. ಆದರೆ ಹೆಣ್ಣೊಬ್ಬಳು ದೆಹಲಿ ಸಿಂಹಾಸನವೇರುವುದು ಸರದಾರರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಆಲ್ತಮಷ್ ಸತ್ತ ತಕ್ಷಣವೇ ಈತನ ಮಗ ರಕ್ನುದ್ದೀನನನ್ನು ಶ್ರೀಮಂತ ಸರದಾರರು 1236 ಮೇ ತಿಂಗಳಲ್ಲಿ ದೆಹಲಿ ಸಿಂಹಾಸನದಲ್ಲಿ ಕೂರಿಸಿದರು. ಆದರೆ ಕೆಲವೇ ತಿಂಗಳುಗಳಲ್ಲಿ ಇವನ ಕೊಲೆಯಾಯಿತು. ಅನಂತರ ಈಕೆಯ ನೈಪುಣ್ಯ, ದಕ್ಷ ಆಡಳಿತ, ನ್ಯಾಯ ಪರತೆಯಿಂದ ಸುಲ್ತಾನ ಪದವಿಯನ್ನು ಪ್ರತಿಷ್ಠೆಯನ್ನು ಹೆಚ್ಚಿಸಿದಳು.

ರಜಿóಯಾ ಅಧಿಕಾರಕ್ಕೆ ಬಂದ ತಕ್ಷಣ ತನ್ನ ಪ್ರಬಲ ವಿರೋಧಿ, ರುಕ್ನುದ್ದೀನನ ವಜೀರನಾಗಿದ್ದ ನಿಜಾಮ್ ಉಲ್ ಮುಲ್ಕ್ ಮುನೈದಿಯನ್ನು ಸದೆಬಡಿದಳು. ಈತ ಶ್ರೀಮಂತ ಸರದಾರರನ್ನು ಬದೌನ್, ಮುಲ್ತಾನ, ಹಾನ್ಸಿ ಮತ್ತು ಲಾಹೋರಿನ ಪ್ರಾಂತ್ಯಾದಿಕಾರಿಗಳನ್ನೂ ಒಟ್ಟಿಗೆ ರಜಿóಯಾಳ ವಿರುದ್ಧ ದಂಗೆಯೆದ್ದ. ಇವನನ್ನು ಹತ್ತಿಕ್ಕಲು ಔದ್‍ನ ಗವರ್ನರ್ ಮಲ್ಲಿಕ್ ನುಸ್ರತುದ್ದೀನ್ ತೈಯ್ಸೀಯನ್ನು ಬರಮಾಡಿಕೊಂಡಳು. ದೆಹಲಿಗೆ ಬರುವಾಗ ಜುನೈದಿಯ ಬೆಂಬಲಿಗ ಮಲ್ಲಿಕ್ ಸೈಫುದ್ದೀನ್ ಕೂಚಿ ಎಂಬಾತ ಬಂಧಿಸಿದ. ರಜಿóಯಾ ದೈರ್ಯಗುಂದದೆ ಪುರುಷವೇಷ ಧರಿಸಿ ಜುನೈದಿಯೊಂದಿಗೆ ಯುದ್ಧಮಾಡಿದಳು. ಜಯ ಯಾರಿಗೂ ಲಭಿಸದಿದ್ದಾಗ ಜುನೈದಿಯ ಬೆಂಬಲಿಗರಿಗೆ ರಜಿóಯಾ ಅಧಿಕಾರದ ಆಸೆ ತೋರಿಸಿ ತನ್ನ ಕಡೆಗೆ ಎಳೆದುಕೊಂಡಳು. ಇದರ ಪರಿಣಾಮದಿಂದ ಜುನೈದಿಯ ಬಲ ಕುಗ್ಗಿ ಅವನು ಉಳಿದವರೊಡನೆ ಸಿರ್‍ಮುರ ಬೆಟ್ಟದ ಸಾಲುಗಳಲ್ಲಿ ತಲೆತಪ್ಪಿಸಿಕೊಂಡ. ಅನಂತರ ತನ್ನ ತಂದೆಯ ಮರಣಾನಂತರ ಕೈಬಿಟ್ಟು ಹೋಗಿದ್ದ ರಣಥಂಬೂರ್, ಗ್ವಾಲಿಯರ್‍ಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ವಿಫಲಳಾದಳು.

ಆಡಳಿತದಲ್ಲಿ ಅನೇಕ ಸುಧಾರಣೆಗಳನ್ನು ತಂದು ಸುಭದ್ರ ಸರ್ಕಾರರಚಿಸಲು ಶ್ರಮಿಸಿದಳು. ಖ್ವಾಜಮುಹಾಜಬುದ್ದೀನ್‍ನನ್ನು ವಜೀರನನ್ನಾಗಿ ನೇಮಿಸಿ ನಿಜಾಮ್- ಉಲ್ -  ಮುಲ್ಕ ಎಂಬ ಬಿರುದು ಕೊಟ್ಟಳು. ಮಲ್ಲಿಕ್ ಸೈಫುದ್ದೀನ್ ಐಬಕ್‍ಭತುನನ್ನು ಸೇನಾನಿಯಾಗಿ ನೇಮಿಸಿದಳು. ಲಾಹೋರ್ ಪ್ರಾಂತ್ಯ ನೋಡಿಕೊಳ್ಳಲು ಕಬೀರ್ ಖಾನ್ ಅಯಾಜ್‍ನನ್ನು ನಿಯೋಜಿಸಿದಳು. ಇಖ್ತಿಯಾರ್ - ಉದ್ - ದೀನ್ ಅಲ್ತೂನಿಯನ್ನು ತಬರ್ ಯಿಂದ್ ಅಥವಾ ಭತಿಂದ ಪ್ರಾಂತ್ಯದ ಅಧಿಕಾರಿಯಾಗಿ ನೇಮಿಸಿದಳು. ಅಬಿಸೀನಿಯದ ಮುಖ್ಯ ಗುಲಾಮ ಜಲಾಲುದ್ದೀನ್ ಯಾಕೂತ್‍ನನ್ನು (ಜಮಾಉದ್ದೀನ್) ಅಶ್ವಶಾಲೆಯ ಮುಖ್ಯಸ್ಥನಾಗಿ ನೇಮಿಸಿದಳು. ಇವನಿಗೆ ರಜಿóಯಾ ತೋರಿದ ಒಲವು ತುರ್ಕಿ ಶ್ರೀಮಂತರಿಗೆ ಸರಿಕಾಣಲಿಲ್ಲ. ರಜಿóಯಾ ರಾಜಧಾನಿಯಿಂದ ದೂರವಿದ್ದಾಗ ದೆಹಲಿಯಲ್ಲಿದ್ದು ಪ್ರಾಂತ್ಯಾದಿಕಾರಿಗಳು ಹಾಗೂ ಕೆಲವು ಶ್ರೀಮಂತರು ಅವಳನ್ನು ಅಧಿಕಾರದಿಂದ ಉರುಳಿಸುವ ಯೋಜನೆ ಹಾಕಿದರು. ರಜಿóಯಾಳ ಸಾಮ್ರಾಜ್ಯದ ಉನ್ನ ಅಧಿಕಾರಿಗಳಾದ ಇಖ್ತಿಯಾರುದ್ದೀನ್ ಐತಿಗಿನ್ ಮತ್ತು ಇಖ್ತಿಯಾರುದ್ದೀನ್ ಅಲ್ತೂನಿಯಾ ಇವರಿಬ್ಬರು ದಂಗೆಕೋರರ ಜೊತೆ ಸೇರಿದರು ಯಾಕೂತನನ್ನು ಕೊಲೆ ಮಾಡಿದರು. ಅನಂತರ ರಜಿóಯಾಳನ್ನು ಅಲ್ತೂನಿಯ ಸೆರೆ ಹಿಡಿದು ತಬರ್ ಹಿಂದ್ ಕೋಟೆಯನ್ನು ಬಂದಿಸಿದ. ಐತಿಗಿನ್ ಮತ್ತು ಕೆಲವು ಶ್ರೀಮಂತರು ರಜಿóಯಾಳ ಸಹೋದರ ಮಯಿಜುದ್ದೀನ್ ಬಹ್ರಾಮ್‍ಷಾನನ್ನು ದೆಹಲಿ ಸುಲ್ತಾನನೆಂದು ಘೋಷಿಸಿ ಆಸ್ಥಾನದ ಕೆಲವು ಹುದ್ದೆಗಳನ್ನು ತಮ್ಮಲ್ಲಿ ಹಂಚಿಕೊಂಡರು.

ರಜಿóಯಾ ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಬೇಕೆಂದು ನಿರ್ಧರಿಸಿ ತನ್ನನ್ನು ಸೆರೆಹಿಡಿದಿದ್ದ ಅಲ್ತೂನಿಯನ್ನನೇ ಮದುವೆಯಾದಳು (1240). ಅನಂತರ ಇವರಿಬ್ಬರೂ ಜಾಟರ, ರಜಪೂತರ ಸಹಾಯ ಪಡೆದು ದೆಹಲಿ ಮೇಲೆ ದಂಡೆತ್ತಿ ಹೋದರು. ಈ ಯುದ್ಧದಲ್ಲಿ ರಜಿóಯಾ ಮತ್ತು ಅಲ್ತೂನಿಯ ಸೋತು ಶತ್ರುಗಳಿಂದ ಕೊಲೆಯಾದರು.

ಆಲ್ತಮಷ್‍ನ ಉತ್ತರಾಧಿಕಾರಿಗಳ ಪೈಕಿ ರಜಿóಯಾ ಅತ್ಯಂತ ಸಮರ್ಥಳು. ತನ್ನ ತಂದೆಯೊಂದಿಗೆ ಆಡಳಿತದಲ್ಲಿ ಭಾಗವಹಿಸಿ ಅನುಭವ ಪಡೆದಿದ್ದಳು. ಸಾಮ್ರಾಜ್ಯವನ್ನು ಸಿಂಧ್‍ನಿಂದ ಬಂಗಾಳದವರೆಗೆ ವಿಸ್ತರಿಸಿದಳು. ದಂಗೆಯಕೋರರನ್ನು ಪಿತೂರಿಗಾರರನ್ನು ಸದೆ ಬಡಿದು ರಾಜ್ಯದಲ್ಲಿ ನೆಲೆಸುವಂತೆ ಮಾಡಿದಳು. ತನ್ನ ತಂದೆಯ ಕಾಲದಲ್ಲಿದ್ದ ಅಧಿಕಾರಿಗಳನ್ನೆಲ್ಲ ತೆಗದುಹಾಕಿ ದಕ್ಷರನ್ನು ನೇಮಕಮಾಡಿಕೊಂಡಳು. ಮಂಗೋಲರ ಧಾಳಿಯಿಂದ ಸುಲ್ತಾನರ ರಾಜ್ಯವನ್ನು ರಕ್ಷಿಸಿದ ಕೀರ್ತಿ ಇವಳದು. ಇವಳು ಖುದ್ದಾಗಿ ವಿವಿಧ ಇಲಾಖೆಗಳನ್ನು ಪರೀಕ್ಷಿಸಿ ಪ್ರಜೆಗಳ ಏಳಿಗೆಗಾಗಿ ದುಡಿದಳು. ಚತುರೆ, ನ್ಯಾಯಪರೆ, ಪ್ರಜಾಹಿತ ತತ್ಪರೆ, ವಿದ್ವಜ್ಜನ ಪೋಷಕಳಾಗಿ ರಜಿûಯಾ ತನ್ನ ಆಳ್ವಿಕೆ ನಡೆಸಿ ಸಮರ್ಥ ಸುಲ್ತಾನಳೆನಿಸಿಕೊಂಡಳು.						       
  
(ಕೆ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ